ಸೂರ್ಯ ಚಂದ್ರರಿರುವವರೆಗೂ ಕನ್ನಡ ಭಾಷೆಯು ಜೀವಂತವಾಗಿರುತ್ತದೆ ಎಂದು ನಾಡೋಜ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು

ಸೂರ್ಯ ಚಂದ್ರರಿರುವವರೆಗೂ ಕನ್ನಡ ಭಾಷೆಯು ಜೀವಂತವಾಗಿರುತ್ತದೆ ಎಂದು ನಾಡೋಜ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು

ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಶ್ವದಲ್ಲಿ ಸೂರ್ಯ ಚಂದ್ರರಿರುವವರೆಗೂ ಕನ್ನಡ ಭಾಷೆಯು ಜೀವಂತವಾಗಿರುತ್ತದೆ ಎಂದು ನಾಡೋಜ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು

ಅವರು ಕೃಷ್ಣರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕವು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 35ನೇ ವರ್ಷದ ಶಾಲೆಗೊಂದು ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಶ್ರೀಮತಿ ತಾಯಮ್ಮ ಮತ್ತು ಶ್ರೀ ಎಸ್.ಸಿ. ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ವಿವಿಧ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ವಿಶ್ವದಲ್ಲಿಯೇ ಅತಿ ಹೆಚ್ಚಿನ ಜನರು ಬಳಸುವ ಶ್ರೀಮಂತ ಭಾಷೆಯಾಗಿರುವ ಕನ್ನಡವು ಶ್ರೀಸಾಮಾನ್ಯರ ಭಾಷೆಯಾಗಿದೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯಕ್ಕೆ ಅತೀ ಹೆಚ್ಚು ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡಿಗರಾದ ನಾವು ಕನ್ನಡ ನೆಲ ಜಲ ಹಾಗೂ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೆ, ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡದ ನೆಲದಲ್ಲಿ ವಾಸಿಸುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಕನ್ನಡಿಗರಾದ ನಾವು ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಕನ್ನಡದ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮನಾದ್ದರಿಂದ ಕನ್ನಡವು ಅನ್ನ ಕೊಡುವ ಭಾಷೆಯಾಗಬೇಕು. ಪೋಷಕರು ಆಂಗ್ಲ ಭಾಷಾ ವ್ಯಾಮೋಹವನ್ನು ಬದಿಗಿಟ್ಟು ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿಯೇ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು ಎಂದು ಮಹೇಶ್ ಜೋಶಿ ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿಯೇ ನಡೆಯಲಿದೆ. ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಅಭಿಮಾನಿಗಳ ಸಭೆಯನ್ನು ಮಂಡ್ಯದಲ್ಲಿ ಡಿಸೆಂಬರ್ 7ನೇ ತಾರೀಖು ಗುರುವಾರ ಮಂಡ್ಯ ನಗರದಲ್ಲಿ ಕರೆಯಲಾಗಿದೆ. ಉತ್ತರ ಕರ್ನಾಟಕದ ಕೊಪ್ಪಳ ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 11 ಲಕ್ಷಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಮಂಡ್ಯ ನಗರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಅಭಿಮಾನಿಗಳ ಸಂಖ್ಯೆಯು 15 ಲಕ್ಷಕ್ಕಿಂತ ಹೆಚ್ಚಾಗಬೇಕು. ಈ ದಿಕ್ಕಿನಲ್ಲಿ ಕನ್ನಡವನ್ನು ಕಟ್ಟುವ, ಕನ್ನಡಿಗರನ್ನು ಒಗ್ಗೂಡಿಸುವ ಸವಾಲು ಎಂದು ಸ್ವೀಕರಿಸಿ ಮಾಡುತ್ತೇನೆ. ಕೊಪ್ಪಳ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿದ್ದ ಮೂರು ನಿರ್ಣಯಗಳು ಕೂಡ ಈಗಾಗಲೇ ಜಾರಿಗೆ ಬಂದಿವೆ. ಮಂಡ್ಯ ಸಮ್ಮೇಳನದಲ್ಲಿಯೂ ಕೇವಲ ಒಂದೆರಡು ನಿರ್ಣಯಗಳನ್ನಷ್ಟೇ ಮಂಡಿಸಿ, ಅವುಗಳ ಅನುಷ್ಠಾನಕ್ಕೆ ಕಾರ್ಯಕ್ರಮ ರೂಪಿಸ ಲಾಗುವುದು. ಪ್ರಸ್ತುತ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ತೀವ್ರವಾದ ಬರಗಾಲವು ಎದುರಾಗಿರುವುದರಿಂದ, ಬರದ ಮಧ್ಯದಲ್ಲಿ ಕನ್ನಡದ ಹಬ್ಬವನ್ನು ಆಚರಿಸುವುದು ಸರಿಯಲ್ಲ, ಕನ್ನಡ ಸಾಹಿತ್ಯ ಪರಿಷತ್ ನಾಡಿನ ಇಡೀ ಕನ್ನಡಿಗರ ಸ್ವಾಭಿಮಾನದ ಗಟ್ಟಿ ಧ್ವನಿಯಾಗಿರುವುದರಿಂದ 2024ನೇ ಸಾಲಿನಲ್ಲಿ ಮಂಡ್ಯದಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಶ್ಚಿತವಾಗಿ ನಡೆಸಲಾಗುವುದು. ನಾಡಿನ ಅನ್ನದಾತರಾಗಿರುವ ರೈತರ ಸಂಕಷ್ಟ ನಮ್ಮ ಕಷ್ಟವೇ ಆಗಿರುವುದರಿಂದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಅಧ್ಯಕ್ಷನಾಗಿ ನಾನು ಕಾವೇರಿ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಕಾವೇರಿ ಹೋರಾಟಕ್ಕೆ ನಾನು ಧ್ವನಿಯೆತ್ತಿದ್ದೇನೆ ಎಂದು ಹೇಳಿದ ಮಹೇಶ್ ಜೋಶಿ ಕೆ. ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕಳೆದ 35 ವರ್ಷಗಳಿಂದ ನಿರಂತರವಾಗಿ ನವೆಂಬರ್ ತಿಂಗಳಿನಾದ್ಯಂತ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳಿಗೆ ತೆರಳಿ ಕನ್ನಡ ಸಾಹಿತ್ಯ ಪರಂಪರೆ ಹಾಗೂ ಸಾಹಿತಿಗಳ ಬಗ್ಗೆ ತಿಳಿಸಿಕೊಡುವ ಶಾಲೆಗೊಂದು ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಈ ಸಾಲಿನ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನಡೆಯುತ್ತಿರುವ ಶಾಲೆಗೊಂದು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿರುವುದು ನನಗೆ ಹೆಮ್ಮೆ ಎನಿಸಿದೆ ಎಂದು ಹೇಳಿದರು.

ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಶಾಲೆಗೊಂದು ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯುತ್ತಿದೆ. ಇಂದಿನ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಭಾಗವಹಿಸಿರುವುದು, ಕನ್ನಡದ ಕಾರ್ಯಕ್ರಮಗಳ ಬಗ್ಗೆ ನಾಡೋಜ ಮಹೇಶ್ ಜೋಶಿ ಅವರಿಗಿರುವ ನೈಜ ಕನ್ನಡ ಕಾಳಜಿಯು ತಿಳಿಯುತ್ತದೆ. ಅಪೂರ್ವವಾದ ಸಾಹಿತ್ಯ, ಶಿಲ್ಪಕಲೆ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಕೃಷ್ಣರಾಜಪೇಟೆ ತಾಲ್ಲೂಕು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ತಾಲೂಕಾಗಿದ್ದು ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡುವ ಜೊತೆಗೆ ಕೆ. ಆರ್.ಪೇಟೆ ಪಟ್ಟಣದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನಕ್ಕೂ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ನಮ್ಮ ತಾಲೂಕಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿಯೂ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಬೇಕು ಎಂದು ಮನವಿ ಮಾಡಿದರು.

ಕೆ.ಆರ್.ಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಡಿ ಬಿ ಸತ್ಯ, ಉಪಪ್ರಾಂಶಪಾಲ ತಿಮ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಸೀತಾರಾಮ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ರಾಮಲಿಂಗಶೆಟ್ಟಿ , ಗೌರವ ಕೋಶಾಧ್ಯಕ್ಷ ಡಾ.ಬಿ.ಎಂ. ಪಟೇಲ್ ಪಾಂಡು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಅಂಚಿ ಸಣ್ಣಸ್ವಾಮಿಗೌಡ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶ ಅಧ್ಯಕ್ಷ ಡಾ. ಹುಸ್ಕೂರು ಕೃಷ್ಣೇಗೌಡ, ಅಪ್ಪಾಜಪ್ಪ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಕಟ್ಟೆ ಮಹೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಇದೇ ಸಂದರ್ಭದಲ್ಲಿ ನಾಡಿನ ಸುಪ್ರಸಿದ್ಧ ಜಾನಪದ ಕಲಾವಿದರಾದ ಲಾವಣಿ ಪದಗಾರ ಆರ್.ಕೆ. ಸ್ವಾಮಿ, ಡೊಳ್ಳು ಕುಣಿತ ಕಲಾವಿದೆ ಲಕ್ಷ್ಮಿ ಶ್ರೀನಿವಾಸ್, ನೀಲಗಾರರ ಪದಗಾರ ಮಂಟೇ ಲಿಂಗಯ್ಯ, ಸೋಬಾನೆ ಪದ ಕಲಾವಿದೆ ನಾಗಮ್ಮ, ಜಾನಪದ ಗೀತೆ ಕಲಾವಿದೆ ಮಂಜುಳಾ ಆಲದಹಳ್ಳಿ, ಕಂಸಾಳೆ ಕಲಾವಿದ ಕೈಲಾಸ ಮೂರ್ತಿ, ತಮಟೆ ಕಲಾವಿದ ಕುಂತೂರು ಕುಮಾರ್, ಜಾನಪದ ಹಾಡುಗಾರ್ತಿ ಶಾಂತಮ್ಮ, ತಮಟೆ ಕಲಾವಿದೆ ಚೇಳೂರು ನರಸಮ್ಮ, ಸಂಪ್ರದಾಯ ಪದಗಳ ಹಾಡುಗಾರ್ತಿ ವಡ್ಡಗೆರೆ ಕದರಮ್ಮ, ವೀರಗಾಸೆ ಕಲಾವಿದ ರುದ್ರಸ್ವಾಮಿ ಹಾಗೂ ಪೂಜಾ ಕುಣಿತದ ಕಲಾವಿದ ಚಿಕ್ಕರಸಿನಕೆರೆ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿ ಶ್ರೀಮತಿ ತಾಯಮ್ಮ ಎಸ್‌ಸಿ ಮಲ್ಲಯ್ಯ ಜಾನಪದ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

 *ವರದಿ,ರಾಜು ಜಿಪಿ ಕೆಆರ್ ಪೇಟೆ*

What's Your Reaction?

like

dislike

love

funny

angry

sad

wow