*ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರು,*

*ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಪ್ರಥಮ ಜಗದ್ಗುರು ಶ್ರೀ ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರು,*

*18 ನೇ ವರ್ಷದ ಪುಣ್ಯ ಸ್ಮರಣೆ:-( ದಿನಾಂಕ.೩.೪.೨೦೦೭ )*

ಇತಿಹಾಸದುದ್ದಕ್ಕೂ ಶೌರ್ಯ ಪರಾಕ್ರವನ್ನು ಮೆರೆದ ನಾಯಕ ಜನಾಂಗ,ವರ್ತಮಾನದಲ್ಲಿ ಕಡುಕಷ್ಟದಲ್ಲಿ, ಅಂಧಕಾರದಲ್ಲಿ ಮುಳಿಗಿಹೋಗಿದ್ದ ಸಮಯದಲ್ಲಿ ಭಾಸ್ಕರನು ಉದಯಿಸಿದಂತೆ ಬಂದು ಜನಾಂಗವನ್ನು ಜಾಗೃತಿ ಮೂಡಿಸುವಲ್ಲಿ ಬಿರುಗಾಳಿಯಂತೆ ಬೀಸಿ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿ, ಕಣ್ತೆರೆದು ಎದ್ದುನಿಂತು ನಾವು ನಾಡಿಗೆ ನಾಯಕರೂ ಎಂದು ಕೂಗಿ ಹೇಳಬೇಕೆನ್ನುವಷ್ಟರಲ್ಲಿ ತಣ್ಣಗೆ ಮುಳುಗಿ ಮತ್ತೆ ಗಾಡಾಂಧಕಾರದಲ್ಲಿ ಕೊಂಡೊಯ್ದ ಕಾಲನ ಕರಾಳ ನಿಯಮವನ್ನು ಯಾರಾದರೂ ಮೀರಲಾದೀತೆ.?

 ಜಗದ್ಗುರು ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳು ಅಂತಹ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಇಡೀ ನಾಯಕ ಜನಾಂಗಕ್ಕೆ ಬರಸಿಡಿಲು ಬಂದೆರಗಿ ಕಾರ್ಗತ್ತಲೆಯಲ್ಲಿ ಮುಳಿಗಿದಂತಾದದ್ದು ದುರ್ದ್ಯೆವವೇ ಸರಿ. ದಿನಾಂಕ ೩.೪.೨೦೦೭ ರ ದಿನ ನಾಯಕ ಜನಾಂಗದ ಅಂಧಕಾರದ ದಿನ.ಇಂತಹ ದಿನ ಮುಂದೆಂದೂ ಬರಬಾರದೆಂಬುದೇ ನಮ್ಮೆಲ್ಲರ ಪ್ರಾರ್ಥನೆ.

ಶ್ರೀ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿಯವರಿಗೆ ಅವರ ತಂದೆ ತಾಯಿಗಳು ಇಟ್ಟ ಹೆಸರು ಪ್ರೇಮಕುಮಾರ.ಇವರ ಸ್ವಂತ ಸ್ಥಳ ತುಮಕೂರು ಜಿಲ್ಲೆಯ ತಿಪಟೂರು. ದಿನಾಂಕ ೧.೬.೧೯೭೨ ರಲ್ಲಿ ತಿಪಟೂರಿನ ನಾಯಕ ಮನೆತನದ ರಂಗಸ್ವಾಮಿ ಮತ್ತು ಮಹದೇವಮ್ಮನವರ ಉದರದಲ್ಲಿ ಜನಿಸಿದರು. ಈ ಮಾತಾ ಪಿತರಿಗೆ ಶ್ರೀ ಗಳನ್ನು ಸೇರಿ ಒಟ್ಟು ಆರು ಜನ ಮಕ್ಕಳು. ಶ್ರೀ ಗಳೇ ಮನೆಗೆ ಹಿರಿಯ ಮಗ.ಮೂರು ಜನ ಸಹೋದರರು, ಇಬ್ಬರು ಸಹೋದರಿಯರು. ಕುಟುಂಬ ನಿರ್ವಹಣೆಗೆ ತಂದೆ ತಾಯಿಗಳು ಕೃಷಿ,ಕಾರ್ಮಿಕ ವೃತ್ತಿಯನ್ನು ಕೈಗೊಂಡಿದ್ದರು. ಅನೇಕ ಸಲ ಕಷ್ಟ ಕಾರ್ಪಣ್ಯಗಳು ಬಂದಾಗ ಕೂಲಿನಾಲಿ ಮಾಡಿ ಮಕ್ಕಳನ್ನು ಜೋಪಾನ ಮಾಡಬೇಕಾಗುತ್ತಿತ್ತು.ಶ್ರೀ ಗಳು ಬಾಲ್ಯದ ದಿನಗಳನ್ನು ಹಾಗೂ ಶಿಕ್ಷಣವನ್ನು ಕಡುಕಷ್ಟದಿಂದಲೆ ತಿಪಟೂರಿನಲ್ಲಿ ಕಳೆದರು ಹೆಚ್ಚಿನ ವಿಧ್ಯಾಭ್ಯಾಸ ಮಾಡಲು ಇವರ ಹತ್ತಿರದ ಸಂಬಂದಿಗಳು ಬೆಂಗಳೂರಿನ ಕೈಲಾಸ ಆಶ್ರಮಕ್ಕೆ ತಂದು ಬಿಟ್ಟರು.

ಶ್ರೀ ಗಳು ಬೆಂಗಳೂರಿನ ಕೈಲಾಸ ಆಶ್ರಮಕ್ಕೆ ಬಂದು ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಕ್ರಮೇಣ ಆಶ್ರಮವಾಸ, ಅಲ್ಲಿನ ಪರಿಸರ,ಚಿಕ್ಕ ವಯಸ್ಸಿನ ಶ್ರೀ ಗಳ ಮೇಲೆ ಅಗಾಧವಾದ ಬದಲಾವಣೆಗೆ ಪ್ರೇರಕವಾಗಿ ಪರಿಣಮಿಸಿತು. ಮೊದಲು ಶ್ರೀಗಳಿಗೇನೂ ಸ್ವಾಮೀಜಿಯಾಗಬೇಕು ಎಂಬ ಕಲ್ಪನೆಯೇನೂ ಇರಲಿಲ್ಲವಂತೆ ಅದರೆ, ಆಶ್ರಮದ ಜೀವನ ಕ್ರಮೇಣ ತನ್ನಲ್ಲಿ ಅರಿವನ್ನು ಹೆಚ್ಚಿಸಿ ಚಿಂತನೆಗೆ ಗುರಿಮಾಡಿತು.ಆಲ್ಲದೆ ಕೈಲಾಸಾಶ್ರಮದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳು ಮಹಾನ್‌ ತಪಸ್ವಿಗಳು,ಬ್ರಹ್ಮಜ್ಞಾನಿಗಳೆಂದು ಪೂಜಿತರು,ಇವರ ಮಾರ್ಗದರ್ಶನದಲ್ಲಿ ಮುಂದುವರಿದ ಶ್ರೀ ಗಳಿಗೆ ಅವರ ಆಶೀರ್ವಾದ ಲಭಿಸಿ ಮುಂದೆ ಅವರ ಪರಮ ಶಿಷ್ಯರಾದರು. ಶ್ರೀ ಶ್ರೀ ತಿರುಚಿ ಮಹಾಸ್ವಾಮೀಜಿಯವರೆಂದರೆ ಅವರ ದರ್ಶನ ಮಾತ್ರದಿಂದಲೆ ಅನನ್ಯ ಭಕ್ತಿ ಭಾವಗಳು ಮೂಡುತ್ತಿದ್ದವು,ಅವರೊಬ್ಬ ಪ್ರಾಚೀನ ಕಾಲದ ಋಷಿಮುನಿಗಳಂತೆ , ಭಗವಾನ್ ಮಹರ್ಷಿ ವಾಲ್ಮೀಕಿ ಯವರಂತೆ ನಮಗೆ ಗೋಚರಿಸುತ್ತಿದ್ದರು.

ಇಂಥಹ ಮಹಾನ್ ತಪಸ್ವಿಗಳ ಕೃಪಾಶೀರ್ವಾದವು ಹಾಗೂ ಶ್ರೀ ಶ್ರೀ ರಾಜರಾಜೇಶ್ವರಿದೇವಿ ಅಮ್ಮನವರ ಅನುಗ್ರಹವು ಪುಣ್ಯಾನಂದಪುರಿಗಳ ಮೇಲೆ ಉಂಟಾಗಿತ್ತು. ಇವರು ಕೈಲಾಸ ಆಶ್ರಮದಲ್ಲಿ ಬೆಳೆದು ಬಂದಂತೆ ಎಲ್ಲರ ಪ್ರೀತ್ಯಾದಾರಗಳನ್ನು ಗಳಿಸುತ್ತಾ ಜೀವನದ ಉನ್ನತ ಮೌಲ್ಯಗಳನ್ನು ಸಾಧಿಸುತ್ತಾ, ವೇದ, ಆಗಮ,ಶಾಸ್ತ್ರ, ಸಂಸ್ಕೃತ ಗಳ ಅಧ್ಯಯನವನ್ನು ಮಾಡತ್ತಾ ಪಾಂಡಿತ್ಯವನ್ನು ಗಳಿಸತೊಡಗಿದರು.ಮುಂದೆ ಶ್ರೀ ತಿರುಚಿ ಮಹಾಸ್ವಾಮೀಜಿಯವರಿಂದ ಬ್ರಹ್ಮಚರ್ಯ, ಸನ್ಯಾಸ ದೀಕ್ಷೆ ಗಳನ್ನು ಸ್ವೀಕರಿಸಿದರು. ಬರುಬರುತ್ತಾ ಒಡಹುಟ್ಟಿದ ಕುಟುಂಬ,ಬಂಧು ಬಳಗದವರನ್ನು ತ್ಯಾಗಮಾಡಿ ಸಮಾಜವೇ ನನ್ನ ಕುಟುಂಬ ಬಂಧು ಬಳಗ ಎಲ್ಲವೂ ಎಂದು ಸ್ವೀಕರಿಸಿ, ತನಗೆ ಅಲ್ಲಿವರೆಗೂ ಕುಟುಂಬದವರು ನಾಮಕರಣ ಮಾಡಿದ್ದ " ಪ್ರೇಮಕುಮಾರ " ನೆಂಬ ಹೆಸರಿನಿಂದ ಬದಲಾವಣೆಗೊಂಡು ಮಹಾ ತಪಸ್ವಿಗಳಾದ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳಿಂದ ಶ್ರೀ ಶ್ರೀ ಪುಣ್ಯಾನಂದಪುರಿ ಮಹಾಸ್ವಮಿಗಳಾಗಿ ಮರು ನಾಮಕರಣ ಗೊಂಡರು.ಆನಂತರ ಇದೇ ಹೆಸರಿನಲ್ಲಿ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಪ್ರಪ್ರಥಮ ಪೀಠಾಧಿಕಾರಿಗಳಾಗಿ,ಜಗದ್ಗುರುಗಳಾಗಿ ದಿನಾಂಕ *೯.೨.೧೯೯೮* ರಂದು ಪಟ್ಟಾಧಿಕಾರ ಸ್ವೀಕರಿಸಿದರು.

ಶ್ರೀಗಳು ಇದೆಲ್ಲವೂ ದೇವರ ಕೃಪೆಯಿಂದ ಲಭಿಸಿದ್ದು,ದೇವರ ಅನುಗ್ರಹವಿಲ್ಲದೆ ಯಾವುದೂ ನೆರವೇರಲಾರದು ಎಂಬುದು ಶ್ರೀ ಗಳ ಬಲವಾದ ನಂಬಿಕೆಯಾಗಿತ್ತು.ಶ್ರೀ ಗಳನ್ನು ನಾನು ಸ್ವತಃ ಸಂದರ್ಶನ ಮಾಡುವಾಗ ಕೇಳಿದ್ದು ನೀವು ಸ್ವಾಮೀಜಿಯಾಗಲು ಯಾವ ರೀತಿ ಪ್ರೇರಣೆಯಾಯಿತು ಶ್ರೀ ಗಳೆ ಎನ್ನಲಾಗಿ, ಶ್ರೀ ಗಳು ಅದೆಲ್ಲವೂ ದೇವರ ಅನುಗ್ರಹವೆಂದೆ ಹೇಳುತ್ತಿದ್ದರು. ಜೊತೆಗೆ ಕರ್ನಾಟಕದ ನಾಯಕ ಜನಾಂಗದ ಬಗ್ಗೆ ಹಲವಾರು ಜನರು ಅರಿವು ಮೂಡಿಸಿ ಈ ಜನರ ಉದ್ದಾರಕ್ಕೆ ಹಾಗೂ ಇವರನ್ನು ಒಗ್ಗೂಡಿಸಲು ತಾವು ಮನಸ್ಸು ಮಾಡಿ ಸ್ವಾಮಿಗಳಾಗಿ ಬರಬೇಕು ಎಂದು ಕೇಳಿಕೊಂಡರು, ಇದರಿಂದ ಸಮಾಜಕ್ಕೆ ಕಲ್ಯಾಣವಾಗುವುದಾದರೆ ಖಂಡಿತ ಈ ಗುರು ಸ್ಥಾನವನ್ನು ಒಪ್ಪುಲೇಬೇಕೆಂದು ನನಗೆ ಪ್ರೇರಣೆಯಾಯಿತು.ಈ ವಿಷಯವನ್ನು ತಿರುಚಿ ಶ್ರೀ ಗಳಲ್ಲಿ ನಿವೇದಿಸಿಕೊಂಡಾಗ ಅವರ ಸೂಕ್ತ ಮಾರ್ಗದರ್ಶನವೂ ದೊರೆಯಿತು. ನಂತರ ಅವರು ಆಶೀರ್ವದಿಸಿ ಹೇಳಿದರಂತೆ ನೀನು ಉದ್ದಾರ ಮಾಡಬೇಕಾದ ಜನ ಅಖಂಡ ಕರ್ನಾಟಕದ ಉದ್ದಗಲಕ್ಕೂ ಇದ್ದಾರೆ. ಆದ್ದರಿಂದ ಕರ್ನಾಟಕದ ಮಧ್ಯ ಭಾಗದಲ್ಲಿ ಹೋಗಿ ನೆಲಸು ಎಂದು ಆಶೀರ್ವದಿಸಿ ಅನುಗ್ರಹಿಸಿದರಂತೆ. ಒಮ್ಮೆ ಪುಣ್ಯಾನಂದಶ್ರೀಗಳೊಂದಿಗೆ ನಾನು ಸಂದರ್ಶನದ ವೇಳೆ ಕೇಳಿದ ಮಾತೆಂದರೆ ಶ್ರೀ ಗಳೆ ಈ "ಪುರಿ" ಎಂಬ ನಾಮಾಂಕಿತವೇಕೆ ಇದರ ಅರ್ಥ, ವ್ಯಾಪ್ತಿ ತಿಳಿಸಿ ಗುರುಗಳೆ ಎಂದಾಗ ಅವರು, ಹೇಳಿದ ಮಾತು,ಗುರು ವರ್ಗದ ದಶಮಾನ ಸಂಪ್ರದಾಯಗಳಲ್ಲಿ "ಪುರಿ " ಎನ್ನುವುದು ಒಂದು. ಪುರಿ ಎಂದರೆ ಪಟ್ಟಣ,ನಗರ ಎಂಬ ಅರ್ಥವಿರುವುದನ್ನು ನಾವು ತಿಳಿದಿದ್ದೇವೆ. ಈ ಪುರಿ ಎಂಬ ನಾಮಾಂಕಿತ ಸ್ವಾಮಿಗಳು ಶ್ರೀ ಮಹಾಮಾತೆ ಶ್ರೀ ದೇವಿಯ ಉಪಾಸಕರಾಗಿರುತ್ತಾರೆ.ಈ ನಾಮಾಂಕಿತ ಸ್ವಾಮಿಗಳು ಎಲ್ಲಿ ನೆಲೆಸಿರುತ್ತಾರೊ ಆ ಜಾಗ ಪವಿತ್ರಮಯವಾಗಿ ಸಂಪೂರ್ಣ ಅಭಿವೃದ್ಧಿ ಪಥದಲ್ಲಿ ಸಾಗುವುದು. ಅಂಥಹ ಸ್ಥಳವು ಪಟ್ಟಣವಾಗಿ,ನಗರವಾಗಿ ಸರ್ವತೋಮುಖ ಅಭಿವೃದ್ಧಿ ಹೊಂದುವುದೆಂಬ ನಂಬಿಕೆ ಬಂದಿದೆ.ನನ್ನ ಗುರುಗಳಾದ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಗಳು ಬಂದು ನೆಲೆಸಿದ ಈಗಿನ ಕೈಲಾಸಾಶ್ರಮದ ಸ್ಥಳ ಒಂದು ಅರಣ್ಯವಾಗಿತ್ತು, ಇಂದು ಶ್ರೀ ಗಳ ನೆಲೆಯಿಂದಾಗಿ ಶ್ರೀ ಕ್ಷೇತ್ರ ರಾಜರಾಜೇಶ್ವರಿ ನಗರವಾಗಿ ಕಂಗೊಳಿಸುತ್ತಿದೆ ಎಂದರು.

ಶ್ರೀ ವಾಲ್ಮೀಕಿ ಗುರುಪೀಠ ಸ್ಥಾಪನೆಗಾಗಿ ನಮ್ಮ ಜನಾಂಗದ ಮುಖಂಡರೆಲ್ಲ ಸೇರಿ ಆಗ ಸಚಿವರಾಗಿದ್ದ ಶೀ ತಿಪ್ಪೇಸ್ವಾಮಿ ಚಳ್ಳಕೆರೆ ಇವರ ಮುಖಂಡತ್ವದಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಜಾಗವನ್ನು ಗೊತ್ತುಪಡಿಸಿ, ಭೂಮಿ ಪೂಜೆಗೆಂದು ಪುಣ್ಯಾನಂದಪುರಿ ಶ್ರೀಗಳನ್ನು ಕರೆದುಕೊಂಡು ಹೋದಾಗ, ಶ್ರೀಗಳು ರಾಜನಹಳ್ಳಿಗೆ ಆಗಮಿಸಿ, ಭೂಮಿ ಪೂಜೆ ನೆರವೇರಿಸಿ, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಂಧುಗಳನ್ನ ಉದ್ದೇಶಿಸಿ ಆಶೀರ್ವಚನ ನೀಡಿ ಕುಳಿತಿದ್ದಾಗ,ರಾಜನಹಳ್ಳಿ ಗ್ರಾಮದ ಒಬ್ಬ ಯಜಮಾನರು ಶ್ರೀಗಳ ಹತ್ತಿರ ಬಂದು ಶ್ರೀಗಳೆ ನಾನು ಬಾಲಕ ನಿದ್ದಾಗ ನಮ್ಮ ಊರಿಗೆ ಒಬ್ಬ ಸನ್ಯಾಸಿ ಬಂದಿದ್ದರು, ಅವರು ಹೇಳಿದ್ದು, ಮುಂದೊಂದು ದಿನ ಈ ಹಳ್ಳಿಗೆ ಒಬ್ಬ ಸ್ವಾಮಿಗಳು ಬಂದು ನೆಲಸುವರು, ನಿಮ್ಮ ಗ್ರಾಮವು ಹೆಸರಾಂತ ಗ್ರಾಮವಾಗುವುದು ಎಂದು ಅಲ್ಲಿ ಸೇರಿದ್ದ ನಮಗೆಲ್ಲಾ ಹೇಳಿದ್ದರು.ಆ ಮಾತು ಇಂದು ನಿಜವಾಗಿದೆ ಬುದ್ದಿ ಎಂದು ಹೇಳಿದ್ದರಂತೆ, ಆ ಯಜಮಾನರು ಅಂದು ಹೇಳಿದ್ದ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತಾ ಶ್ರೀಗಳು ನೋಡಿ ಎಲ್ಲಿಯ ರಾಜೇಶ್ವರಿ ! ಎಲ್ಲಿಯ ರಾಜನಹಳ್ಳಿ! ದೇವಿಯ ಕೃಪೆ ಎಷ್ಟು ಸತ್ಯವಾಗಿದೆ ಅಲ್ಲವೆ ಎಂದಿದ್ದರು ಶ್ರೀಗಳು.ಇಂದು ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠವು ಅತ್ಯಂತ ಸುಂದರವಾದ ನಿಸರ್ಗ ರಮಣೀಯ ಸ್ಥಳದಲ್ಲಿ ನೆಲೆಗೊಂಡಿದೆ.ನದಿ ತೀರ ಸುಂದರ ಪರಿಸರ ಎಲ್ಲವೂ ಗುರುಪೀಠದ ಅಭಿವೃದ್ಧಿಗೆ ಪೂರಕವಾಗಿ ಕಂಗೊಳಿಸುತ್ತಿದೆ.ಶ್ರೀ ಮಠಕ್ಕೆ ಪ್ರೇರಕ ಶಕ್ತಿಯಾಗಿ ಪರಿಣಮಿಸಿದೆ.ಇದನ್ನೇ ನಾನು ಪದೇ ಪದೇ ಹೇಳುತ್ತಿದ್ದುದು "*ತೇನವಿನ ತೃಣಮಪಿ ನಾ ಚಲತಿ*" ದೇವರ ಅನುಗ್ರಹವಿಲ್ಲದೆ ಒಂದು ಹುಲ್ಲು ಕಡ್ಡಿಯೂ ಸಹ ಅಲುಗಾಡದು.ಎಲ್ಲಾ ಜೀವರಾಶಿಗಳಿಗೂ ದೇವರ ಅನುಗ್ರಹವು ಬೇಕೇ ಬೇಕು ಎನ್ನುತ್ತಿದ್ದರು ಶ್ರೀಗಳು.

ಶ್ರೀ ಮಹರ್ಷಿ ವಾಲ್ಮೀಕಿ ಮಹಾ ಸಂಸ್ಥಾನ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾದ್ಯಕ್ಷರಾದ ಬಳಿಕ, ಪುಣ್ಯಾನಂದಪುರಿ ಶ್ರೀ ಗಳು ರಾಜ್ಯದ ಉದ್ದಗಲಕ್ಕೂ ಬಿರುಗಾಳಿಯಂತೆ ಸಂಚರಿಸಿ ಜನಾಂಗದ ಸ್ಥಿತಿಗತಿಗಳನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣ ಅರಿವು ಮಾಡಿಕೊಂಡರು.ಒಂದು ಕಾಲದಲ್ಲಿ ಕರ್ನಾಟಕವನ್ನೆ ಸಾಮ್ರಾಜ್ಯವನ್ನಾಗಿ ಆಳಿ ಈ ನಾಡು ನುಡಿ ನೆಲ ಜಲಗಳ ರಕ್ಷಣೆಗಾಗಿ ಅಹೋರಾತ್ರಿ ತಮ್ಮ ಶೌರ್ಯ ಪರಾಕ್ರಮಗಳಿಂದ ಹೋರಾಟ ಮಾಡಿ ಪ್ರಜೆಗಳಿಗೆ ನೆಮ್ಮದಿಯ ಆಡಳಿತವನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಸಾರ್ವಜನಿಕರಿಂದ ಮನ್ನಣೆಗೆ ಅರ್ಹವಾಗಿದ್ದ ಈ ವೀರ ಜನಾಂಗದ ಬಗ್ಗೆ, ಈವತ್ತಿನ ಪರಿಸ್ಥಿತಿಯನ್ನು ಅರಿತ ಶ್ರೀ ಗಳು ಮಮ್ಮಲ ಮರುಗಿದ್ದುಂಟು.ಈ ದಿಸೆಯಲ್ಲಿ ಈ ಜನಾಂಗವನ್ನು ಬಹು ಮುಖ್ಯವಾಗಿ

ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಧಾರ್ಮಿಕವಾಗಿ,ರಾಜಕೀಯವಾಗಿ,ಆರ್ಥಿಕವಾಗಿ ಎಚ್ಚರ ಗೊಳಿಸಬೇಕೆಂಬ ಮಾರ್ಗದಲ್ಲಿ ಸಾಗಿ ಶ್ರೀ ವಾಲ್ಮೀಕಿ ಗುರುಪೀಠವನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸಿದ್ದರು.ತಾವು ಪೀಠಕ್ಕೆ ಬಂದಮೇಲೆ ನಿರಂತರವಾಗಿ ನಾಡಿನುದ್ದಕ್ಕೂ ಸಂಚಾರ ಮಾಡಿ ಸಭೆ, ಸಮಾರಂಭಗಳು,ವಾಲ್ಮೀಕಿ ಜಯಂತಿಗಳನ್ನು, ಸಮ್ಮೇಳನಗಳನ್ನು ಸಂಘಟಿಸುತ್ತಾ ಸಮಾಜದಲ್ಲಿ ಅರಿವು ಮೂಡಿಸಲಾರಂಭಿಸಿದರು. ಶ್ರೀಗಳು ಗುರುಪೀಠದ ಅಭಿವೃದ್ಧಿಯ ಕಡೆ ಹೆಚ್ಚು ಗಮನಹರಿಸಿ ಭಕ್ತರ ಹಾಗೂ ದಾನಿಗಳ ಸಹಕಾರದಿಂದ ಹಲವಾರು ಕಟ್ಟಡಗಳನ್ನು ನಿರ್ಮಾಣ ಮಾಡಿಸಿದ್ರು.ಎಸ್ ಎಸ್ ಎಸ್ ಎಲ್ ಸಿ ವರೆಗಿನ ಶಿಕ್ಷಣ ಆರಂಭಿಸಿದರು, ಡಿಇಡಿ ಕಾಲೇಜನ್ನು ತೆರೆದರು.ಇದಕ್ಕಾಗಿ ಪ್ರಖ್ಯಾತ ನರರೋಗ ತಜ್ಞರಾದ ಡಾ.ಜಿ.ರಂಗಯ್ಯ ಮತ್ತು ರತ್ನ ರಂಗಯ್ಯ ನವರ ಮೇಲೆ ಪ್ರಭಾವಬೀರಿ ಅವರಿಂದ ಡಿಎಡ್ ಕಾಲೇಜ್ ಕಟ್ಟಡನ್ನು ಶ್ರೀ ಮಠದ ಆವರಣದಲ್ಲಿ ನಿರ್ಮಾಣ ಮಾಡಿಸಿದರು,ಆದರೆ ರಾಜ್ಯ ಸರಕಾರವು ಇತ್ತೀಚೆಗೆ ಡಿಎಡ್ ಶಿಕ್ಷಣವನ್ನು ಸ್ಥಗಿತವಾಗಿಸಿದೆ.ಈ ಸುಂದರ ಕಟ್ಟಡಲ್ಲಿ ಇತರೆ ಶೈಕ್ಷಣಿಕ ಕಾರ್ಯಗಳು ನಡೆಯುತ್ತಿವೆ.ಪ್ರೌಢಶಾಲಾ ಕಟ್ಟಡಗಳು, ವಿದ್ಯಾರ್ಥಿ ನಿಲಯ, ಅನ್ನದಾಸೋಹ ಕಟ್ಟಡಗಳು ಇವರ ಕಾಲದಲ್ಲಿ ನಿರ್ಮಾಣವಾದುವು.ರಾಜ್ಯದ ಸುಮಾರು ೧೫೦ ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಿದ್ದರು.ಪುಣ್ಯಾನಂದಪುರಿಶ್ರೀಗಳು ಈಸ್ಥಳಕ್ಕೆ ಬಂದು ನೆಲೆಸಿದ್ದಾಗ ಕೇವಲ ಒಂದು ಚಿಕ್ಕ ಹುಲ್ಲಿನ ಗುಡಿಸಲೋಪಾದಿಯ ಕುಟೀರದಲ್ಲಿ ಒಂದೆರಡು ವರ್ಷಗಳು ನೆಲೆಸಿದ್ದು ಬಹು ಕಷ್ಟದ ದಿನಗಳನ್ನು ಕಂಡಿದ್ದರು.ಅವರ ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಅವರು ಜೀವಿಸಿದ್ದ ಕೇವಲ ೯ ವರ್ಷಗಳಲ್ಲಿ ಇತರೆ ಸಮಾಜದವರು ಬೆಕ್ಕಸ ಬೆರಗಾಗುವಂತೆ ಶ್ರೀಮಠವನ್ನು ಅಭಿವೃದ್ಧಿ ಪಡಿಸಿದ್ದರು.ರಾಜ್ಯಾದ್ಯಂತ ಪ್ರತಿ ವರ್ಷ ಪ್ರವಾಸ ಮಾಡುತ್ತಾ ಜನರನ್ನು ಶ್ರೀಮಠದ ಮೂಲಕ ಅಭಿವೃದ್ಧಿ ಕಡೆಗೆ ಎಳೆಯುತ್ತಿದ್ದರು.ಪ್ರತಿವರ್ಷ ಭಕ್ತರಿಂದ ಬರುತ್ತಿದ್ದ ಸಹಾಯದಿಂದ, ದೇಣಿಗೆಯಿಂದ ಶ್ರೀ ಮಠದಲ್ಲಿ ಹಾಗೂ ಹೊರಗೆ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಸಮಾಜದಲ್ಲಿ ಅತಿ ಕ್ಷಿಪ್ರವಾಗಿ ಸಂಘಟನೆ,ಜಾಗೃತಿಯ ಅರಿವನ್ನು ಮೂಡಿಸಿದ್ದರು .ಶ್ರೀ ಗಳು ಪಟ್ಟಾಭಿಷಕ್ತವಾದ ಕೇವಲ ಅಲ್ಪಾವಧಿಯಲ್ಲಿಯೇ ಅಗಾಧವಾದ ಪರಿಶ್ರಮದಿಂದ ಶ್ರೀ ಮಠವನ್ನು ಕಟ್ಟಿ ಒಂದು ಗೌರವದ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದರು.ಚಿಕ್ಕವಯಸ್ಸಿನವರಾಗಿದ್ದ ಪುಣ್ಯಾನಂದಶ್ರೀಗಳನ್ನು ಸಮಾಜದ ಕೆಲವು ಅಲ್ಪಜ್ಞಾನಿಗಳು ಕಾಡದೆ ಬಿಟ್ಟಿರಲಿಲ್ಲ,ಎಷ್ಟೋ ಬಾರಿ ಅವರಿಗೆ ಕಣ್ಣೀರು ತರಿಸಿದ್ದರು.ಅದರೆ ಅದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಜಗ್ಗದೆ,ಬಗ್ಗದೆ ಅತ್ಯಂತ ಕ್ರಿಯಾಶೀಲರಾಗಿ ಜನಾಂಗವನ್ನು ಮುನ್ನಡೆಸುತ್ತಿದ್ದರು . ಇಂಥಹ ಪರಮಪೂಜ್ಯರನ್ನು ವಿಧಿ ಬಹಳ ದಿನಗಳು ಉಳಿಸಲಿಲ್ಲ, ದಿನಾಂಕ *೩.೪.೨೦೦೭* ರಂದು ದಾವಣಗೆರೆಯ ಕೆರೂರ್ ರೈಲ್ವೆ ಕ್ರಾಸ್ ದಾಟುವಾಗ ಅವರ ವಾಹನ ದರಂತಕ್ಕೀಡಾಗಿ ಪುಣ್ಯಾನಂದಪುರಿಶ್ರೀಗಳು ಆ ಕ್ಷಣವೇ ಮರಣವನ್ನಪ್ಪಿದರು. ಕ್ಷಣ ಮಾತ್ರದಲ್ಲಿ ರಾಜ್ಯದ ತುಂಬಾ ಸುದ್ದಿ ಹರಡಿತು. ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠ ಕ್ಕೆ ಸಾಗರೋಪಾದಿಯಲ್ಲಿ ಬಂದು ಸೇರಿದರು. ಶ್ರೀಗಳ ಅಂತ್ಯ ಕ್ರಿಯೆ ನಾಯಕ ಜನಾಂಗದ ವಿಧಿವಿಧಾನಗಳೊಂದಿಗೆ ಶ್ರೀ ಮಠದ ಆವರಣದಲ್ಲಿ ನೆರವೇರಿತು. ಶ್ರೀಗಳ ಸ್ಮಾರಕ ಗದ್ದುಗೆ ಮೇಲೆ ಪುಣ್ಯಾನಂದಪುರಿಶ್ರೀಗಳ ಸುಂದರವಾದ ಪ್ರತಿಮೆ ಸ್ಥಾಪಿತವಾಗಿದ್ದು ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ.ಈ ಮೂಲಕ ನಾಯಕ ಜನಾಂಗದ ಮೇರು ಪರ್ವತದಂತಿದ್ದ ಶ್ರೀಗಳು ಕಣ್ಮರೆಯಾದರು.ಅಪಾರ ಸಂಖ್ಯೆಯ ನಾಯಕ ಜನಾಂಗ ಅತೀವ ದುಃಖಕ್ಕೀಡಾಯಿತು. ಶ್ರೀ ಗಳ ಆಶೀರ್ವಾದ ಹಾಗೂ ಅವರು ನೀಡಿದ ಮಾರ್ಗದರ್ಶನ ಸದಾ ಸಮುದಾಯವನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯಲೆಂಬುದು ನಮ್ಮೆಲ್ಲರ ಪ್ರಾರ್ಥನೆ.

" *ಶ್ರೀ ಗಳ 18 ನೇ ಪುಣ್ಯ ಸ್ಮರಣೆಯಂದು ಈದೋ ನನ್ನ ನುಡಿ ನಮನ "*    

" *ಜೈ ಪುಣ್ಯಾನಂದಪುರಿಶ್ರೀ."*

          *ಲೇಖಕರು: ಹರ್ತಿಕೋಟೆ ವೀರೇಂದ್ರಸಿಂಹ,*

What's Your Reaction?

like

dislike

love

funny

angry

sad

wow