ಕೃಷ್ಣರಾಜಪೇಟೆ ಶಾಸಕ ಎಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ 2 ವರ್ಷಗಳ ನಂತರ ನಡೆದ ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿ ಸಭೆ, ಸಮಿತಿ ಸದಸ್ಯರು ಹಾಗೂ ಕಾರ್ಯದರ್ಶಿಗಳಾದ ತಹಶೀಲ್ದಾರ್ ಆದರ್ಶ ಸಭೆಯಲ್ಲಿ ಭಾಗಿ*..
ಕೃಷ್ಣರಾಜಪೇಟೆ ತಾಲೂಕಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ಅಕ್ರಮ ಸಕ್ರಮ ಭೂ ಸಮಿತಿಯ ಅಡಿಯಲ್ಲಿ ಭೂ ಮಂಜೂರಾತಿ ಕೋರಿ 6,000ಕ್ಕೂ ಹೆಚ್ಚಿನ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಆದಷ್ಟು ಶೀಘ್ರವಾಗಿ ಗೋಮಾಳಗಳು ಗುಂಡು ತೋಪುಗಳನ್ನು ಹೊರತುಪಡಿಸಿ ಅಕ್ರಮವಾಗಿ ಭೂಮಿಯನ್ನು ಉಳುಮೆ ಮಾಡುತ್ತಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ದಾಖಲಾತಿಗಳನ್ನು ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಚರ್ಚೆಗೆ ಇಡುವಂತೆ ಶಾಸಕ ಹೆಚ್.ಟಿ. ಮಂಜು ತಹಶೀಲ್ದಾರ್ ಆದರ್ಶ ಅವರಿಗೆ ನಿರ್ದೇಶನ ನೀಡಿದರು.
ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿಯ ಸದಸ್ಯರಾದ ಬಿ.ಎಲ್. ದೇವರಾಜು ಮಾತನಾಡಿ ಕೃಷ್ಣರಾಜಪೇಟೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ರೈತರೊಬ್ಬರು ಅಸ್ತಿತ್ವಕ್ಕೆ ಬಂದಿಲ್ಲ ಹಾಗೂ ಕಾರ್ಯನಿರ್ವಹಿಸುತ್ತಿಲ್ಲ, ನಾನು ವ್ಯವಸಾಯ ಮಾಡುತ್ತಿರುವ ಭೂಮಿಯ ಮಂಜೂರಾತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸಕಾರಣವಿಲ್ಲದೆ ವಿಲೇ ಮಾಡಲಾಗಿದೆ, ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಉಚ್ಚ ನ್ಯಾಯಾಲಯವು ಇದೇ ತಿಂಗಳು 15ರೊಳಗೆ ಅರ್ಜಿಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿ ಆದೇಶ
ಹೊರಡಿಸಿದೆ. ಆದ್ದರಿಂದ ನಮ್ಮ ತಾಲೂಕಿನಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಭೂಮಿಯನ್ನು ರೈತರಿಗೆ ಮಂಜೂರು ಮಾಡುವ ದಿಕ್ಕಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡೋಣ. ಕನಿಷ್ಠ 10 ಗುಂಟೆಯೂ ಭೂಮಿಯನ್ನು ಹೊಂದಿರದ ಬಡ ರೈತರು ಭೂಮಿಯ ಹಕ್ಕನ್ನು ಹೊಂದುವ ದಿಕ್ಕಿನಲ್ಲಿ ಬದ್ಧತೆಯಿಂದ ಕೆಲಸ ಮಾಡೋಣ ಎಂದು ಮನವಿ ಮಾಡಿದರು. ಸಮಿತಿಯ ಸದಸ್ಯರಾದ ಬಸ್ತಿ ರಂಗಪ್ಪ, ಕೋಮಲ ರಾಯಪ್ಪ, ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿಯ ವ್ಯವಸ್ಥಾಪಕ ನಿರ್ವಾಹಕ ಶಿರಸ್ತೇದಾರ್ ರವಿ, ರಾಜಶ್ವ ನಿರೀಕ್ಷಕರಾದ ಭೂಕನಕೆರೆ ಹೋಬಳಿಯ ಚಂದ್ರಕಲಾ, ಕಸಬಾ ಹೋಬಳಿಯ ಜ್ಞಾನೇಶ್, ಶೀಳನೆರೆ ಹಾಗೂ ಸಂತೆ ಬಾಚಹಳ್ಳಿ ಹೋಬಳಿಯ ರಾಜಮೂರ್ತಿ, ಅಕ್ಕಿಹೆಬ್ಬಾಳು ಹೋಬಳಿಯ ನರೇಂದ್ರ, ಕಿಕ್ಕೇರಿ ಹೋಬಳಿಯ ಗೋಪಾಲಕೃಷ್ಣ, ವಿಷಯ ನಿರ್ವಾಹಕರಾದ ನಬಿ, ಮೆಹಬೂಬ್, ಲಕ್ಷ್ಮೀ ಹಾಗೂ ಗ್ರಾಮ ಆಡಳಿತ ಅಧಿಕಾರಿ ಜಗಧೀಶ್ ಸಭೆಯಲ್ಲಿ ಭಾಗವಹಿಸಿದ್ದರು.
*ರೈತಾಪಿ ವರ್ಗದಲ್ಲಿ ಚಿಗುರಿದ ಕನಸು*..ಕಳೆದ 10ವರ್ಷಗಳಿಂದ ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿಯು ಕಾರ್ಯ ನಿರ್ವಹಿಸಿಲ್ಲ, 10 ಸಾವಿರಕ್ಕೂ ಹೆಚ್ಚಿನ ರೈತರು ಅಕ್ರಮ ಸಕ್ರಮ ಸಮಿತಿಗೆ ನಮೂನೆ 50 ಹಾಗೂ 53ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ತಾವು ಬೇಸಾಯ ಮಾಡುತ್ತಿರುವ ಜಮೀನುಗಳನ್ನು ಸಕ್ರಮ ಮಾಡಿಸಿ ಮಂಜೂರು ಮಾಡಿಸಿಕೊಳ್ಳಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೂತನ ಶಾಸಕರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷದ ನಂತರ ಅಕ್ರಮ ಸಕ್ರಮ ಭೂ ಮಂಜೂರಾತಿ ಸಮಿತಿಯು ಕಾರ್ಯ ರೂಪಕ್ಕೆ ಬಂದಿರುವುದು ಸಂತೋಷ ತಂದಿದೆ. ಭೂ ಮಂಜೂರಾತಿ ಸಮಿತಿಯು ಆದಷ್ಟು ಶೀಘ್ರವಾಗಿ ಭೂ ಮಂಜೂರಾತಿ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಬಡ ರೈತರಿಗೆ ಸಾಮಾಜಿಕ ನ್ಯಾಯ ನೀಡುವ ಜೊತೆಗೆ ಭೂಮಿಯ ಹಕ್ಕನ್ನು ನೀಡಲಿ ಎನ್ನುವುದು ಸಾವಿರಾರು ರೈತರ ಮನದಾಳದ ಆಶಯವಾಗಿದೆ.
What's Your Reaction?