ಹಸಿವು ಮುಕ್ತ ಕರ್ನಾಟಕ ನನ್ನ ಗುರಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ. ಸಿದ್ದರಾಮಯ್ಯ
ರೈತನು ಬೆಳೆದ ಕೃಷಿ ಉತ್ಪನ್ನಗಳಿಗೆ ರೈತನೇ ಬೆಲೆ ನಿಗಧಿಪಡಿಸಿ ಮಾರಾಟ ಮಾಡು ವಂತೆ ಆಗಬೇಕು. ಆಗ ಮಾತ್ರ ರೈತನು ಕೃಷಿಯನ್ನು ಲಾಭಧಾಯಕ ಉಧ್ಯಮವ ನ್ನಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ರೈತನಾಯಕ ಕೆ. ಎನ್.ಕೆಂಗೇಗೌಡ ರೈತ ಸಭಾ ಭವನವನ್ನು ಉದ್ಘಾಟಿಸಿ ಟಿಎ ಪಿಸಿಎಂಎಸ್ ಆವರಣದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕೊದ್ಯಮಿಗಳು ತಮ್ಮ ಕಾರ್ಖಾನೆಯಲ್ಲಿ ಉತ್ಪಾದಿಸುವ ವಸ್ತುಗಳಿಗೆ ಬೆಲೆ ನಿಗಧಿಪಡಿಸಿ ಮಾರಾಟ ಮಾಡುವಂತೆ ರೈತರೂ ಕೂಡಾ ತಾವು ಬೆಳೆದ ಕೃಷಿ ಉತ್ಪನ್ನಗಳಾದ ಕಬ್ಬು, ಭತ್ತ, ರಾಗಿ, ಜೋಳ, ತೆಂಗು, ರೇಷ್ಮೆ, ತರಕಾರಿ ಸೇರಿದಂತೆ ಎಲ್ಲಾ ಉತ್ಪನ್ನಗಳಿಗೂ ಬೆಲೆ ನಿಗಧಿಪಡಿಸಿ ಮಾರಾಟ ಮಾಡುವಂತಹ ನೀತಿಯು ಜಾರಿಯಾದಾಗ ಮಾತ್ರ ಅನ್ನದಾತನಾದ ರೈತ ನೆಮ್ಮದಿಯ ಜೀವನ ನಡೆಸಲು ಸಾಧ್ಯ, ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ರೈತನಿಗೆ ಬೆಲೆ ನಿಗಧಿಪಡಿಸಿ ಮಾರಾಟ ಮಾಡುವ ಅಧಿಕಾರ ನೀಡಿಲ್ಲ. ರೈತ ವಿರೋಧಿಯಾಗಿರುವ ಕೇಂದ್ರ ಸರ್ಕಾರವು ರೈತಪರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸದೇ ಕೈಗಾರಿಕೊದ್ಯಮಿಗಳನ್ನು ಓಲೈಕೆ ಮಾಡುತ್ತಾ ರೈತರ ವಿರೋಧಿಯಂತೆ ಕೆಲಸ ಮಾಡುತ್ತಿದೆಯಲ್ಲದೆ ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ಅಗತ್ಯ ಅನುಧಾನ ನೀಡದೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ನಬಾರ್ಡ್ ವತಿಯಿಂದ ರಾಜ್ಯಕ್ಕೆ ನೀಡಬೇಕಾದ ಐದೂವರೆ ಸಾವಿರ ಕೋಟಿ ಅನುದಾನದ ಪೈಕಿ ಕೇವಲ ಎರಡು ಸಾವಿರದ ಮುನ್ನೂರು ಕೋಟಿ ಹಣ ನೀಡಿ ಶೇಕಡಾ 60ರಷ್ಟು ರೈತರ ಹಣಕ್ಕೆ ಕತ್ತರಿ ಹಾಕಿದೆ. ಈ ಬಗ್ಗೆ ನಮ್ಮ ರಾಜ್ಯದ ಲೋಕಸಭಾ ಸದಸ್ಯರು, ಕೇಂದ್ರದ ಸಚಿವರು ಪ್ರಶ್ನೆ ಮಾಡದೇ ರೈತ ನಾಯಕರಂತೆ ಪೋಸು ನೀಡುತ್ತಿದ್ದಾರೆ. ರಾಜ್ಯದ ರೈತರಿಗೆ ನ್ಯಾಯ ಒದಗಿಸಿಕೊಟ್ಟು, ರೈತರ ಉತ್ಪನ್ನಗಳಿಗೆ ಬೆಂಬಲ ನೀಡಿ ರೈತ ಪರವಾಗಿ ಕೆಲಸ ಮಾಡುತ್ತಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದರು. *ಹಸಿವು ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ*.
ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿ 5ಕೆಜಿ ಯಿಂದ 10ಕೆಜಿ ಗೆ ಪಡಿತರ ಅಕ್ಕಿ ನೀಡಿ ಹಸಿವು ಮುಕ್ತ ಕರ್ನಾಟಕ ರಾಜ್ಯವನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ವಾಸಿಸುವ ಬಡಜನರು ಹಾಗೂ ಶೋಷಿತ ವರ್ಗಗಳ ಜನರು ಹಸಿವಿನಿಂದ ಬಳಲ ಬಾರದು ಎಂಬ ಸದಾಶಯದಿಂದ ಎರಡು ಹೊತ್ತು ಹೊಟ್ಟೆ ತುಂಬಾ ಊಟ
ಮಾಡಲೆಂದು 10ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಓಡಾಡಲು ಫ್ರೀ ಮಾಡಿದ್ದೇವೆ, ತಿಂಗಳಿಗೆ ಎರಡು ಸಾವಿರ ರೂಪಾಯಿ ಗೃಹ ಲಕ್ಷ್ಮೀ ಹಣ ನೀಡುವ ಜೊತೆಗೆ 200ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿ ನಿರುದ್ಯೋಗಿ ಯುವಜನರಿಗೆ ಯುವನಿಧಿ ಹೆಸರಿನಲ್ಲಿ ಭತ್ಯೆ ನೀಡುತ್ತಿದ್ದೇವೆ. ಹಾಲಿಗೆ ಪ್ರತೀ ಲೀಟರ್ ಗೆ 5ರೂ ಸಹಾಯ ಧನ ನೀಡಿ, 5ಲಕ್ಷ ರೂಗಳ ವರೆಗೆ ಬಡ್ಡಿರಹಿತ ಸಾಲ ನೀಡುತ್ತಿರುವುದು ಈ ನಿಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂಬ ಸತ್ಯ ಅರಿಯಬೇಕು ಎಂದು ಜನರ ಭಾರೀ ಚಪ್ಪಾಳೆ ನಡುವೆ ಹೇಳಿದರು.
ನನ್ನ ಮೇಲೆ ಹಾಕಿರುವ ಈಡಿ ಕೇಸು ರಾಜಕೀಯ ಪ್ರೇರಿತವಾಗಿದೆ, ರಾಜ್ಯಪಾಲರು ಕೇಂದ್ರ ಸರ್ಕಾರ ಪ್ರಯೋಜಿತ ಈಡಿ ಮೇಲೆ ಒತ್ತಡ ಹೇರಿ ರಾಜಕಾರಣ ಮಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿರುವ ನಾನು ಎಂದಿಗೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೇಡಿನ ರಾಜಕಾರಣ ಮಾಡಿಲ್ಲ. ನನ್ನ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮಾಡುತ್ತಿರುರುವುದಕ್ಕೆ ನಾನು ಜಗ್ಗುವುದಿಲ್ಲ. ರಾಜ್ಯದ ಜನತೆ ನನ್ನ ನೇತೃತ್ವದಲ್ಲಿ ನಡೆಯುತ್ತಿರುವ
ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಮೆಚ್ಚಿದ್ದಾರೆ. ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಎಲ್ಲಾ ಮೂರೂ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.
ಕೆ.ಆರ್.ಪೇಟೆ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದಿದ್ದರೂ ಜೆಡಿಎಸ್ ಶಾಸಕರಾದ ಮಂಜು ಅವರು ಕೆರೆ ಕಟ್ಟೆಗಳು, ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ನೀಡಿದ್ದಾರೆ, ಖಂಡಿತವಾಗಿ ಅನುದಾನ ನೀಡುತ್ತೇನೆ. ರಾಜ್ಯದ ಜನತೆಯ ನೋವು ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ನನಗೆ ಮುಖ್ಯವೇ ಹೊರತು ಸೇಡಿನ ರಾಜಕೀಯವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
*ಸಹಕಾರ ಕ್ಷೇತ್ರ ರಾಜಕೀಯ ದಿಂದ ಮುಕ್ತವಾಗಿರಬೇಕು*.
ರೈತರ ಕೃಷಿ ಚಟುವಟಿಕೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಕ್ಷೇತ್ರವು ವರದಾನವಾಗಿದೆ. ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರು ರಾಜಕೀಯದಿಂದ ಹೊರಬಂದು ರೈತರ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡಿ ಸಹಕಾರ ಕ್ಷೇತ್ರವನ್ನು ಹಾಳು ಮಾಡುವ ಹೆಗ್ಗಣಗಳು ಪ್ರವೇಶ ಮಾಡದಂತೆ ಎಚ್ಚರ ವಹಿಸಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಕೆ.ಆರ್.ಪೇಟೆ ಕಸಬಾ ಸೊಸೈಟಿ, ಹೊಸಹೊಳಲು ಹಾಗೂ ಕಿಕ್ಕೇರಿಯ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಾ ರೈತರ ಕೃಷಿ ಚಟುವಟಿಕೆಗೆ ಸಹಾಯ ಮಾಡಿ ಪ್ರಗತಿಯ ದಿಕ್ಕಿನತ್ತ ಸಾಗುತ್ತಿವೆ. ಕೆ.ಆರ್.ಪೇಟೆ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್ ಅವರ ಕಾರ್ಯವೈಖರಿಯು ಉತ್ತಮವಾಗಿದೆ ಎಂದು ಶ್ಲಾಘಿಸಿದರು.
ರಾಜ್ಯದ ಸಹಕಾರ ಸಚಿವ ಕೆ. ಎನ್. ರಾಜಣ್ಣ, ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಹಾಗೂ ಶಾಸಕ ಹೆಚ್.ಟಿ. ಮಂಜು ಸಭೆಯಲ್ಲಿ ಮಾತನಾಡಿದರು.
ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿ ಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಆರ್ ಟಿ ಓ ಮಲ್ಲಿಕಾರ್ಜುನ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಉಪಾಧ್ಯಕ್ಷ ಅಶೋಕ್, ಎಂ.ಡಿ. ಕೃಷ್ಣಮೂರ್ತಿ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಮೋಹನ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ. ಮಂಜೇಗೌಡ, ನಾಗೇಂದ್ರ ಕುಮಾರ್, ಕೊಡಿಮಾರನಹಳ್ಳಿ ದೇವರಾಜು, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಜಿ ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಕ್ ತನ್ವಿರ್ ಆಸೀಫ್, ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಹೆಲಿಕಾಫ್ಟರ್ ನಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರಾದ ರಾಜಣ್ಣ ಹಾಗೂ ಚಲುವರಾಯ ಸ್ವಾಮಿ ಬಂಡಬೋಯನಹಳ್ಳಿ ಹೆಲಿ ಪ್ಯಾಡ್ ನಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ಕೊಡಿಮಾರನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಲಕ್ಷ್ಮೀದೇವಿ ಸಮುದಾಯ ಭವನ ಉದ್ಘಾಟನೆ ಮಾಡಿ ಕೆ.ಆರ್. ಪೇಟೆ ಪಟ್ಟಣದಲ್ಲಿ ಕಸಬಾ ಸೊಸೈಟಿ ವತಿಯಿಂದ ನಿರ್ಮಿಸಿರುವ ರೈತ ಸಭಾ ಭವನ ಉದ್ಘಾಟನೆ ಮಾಡಿದ ನಂತರ ಮುಖ್ಯ ಮಂತ್ರಿಗಳು ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮರಳಿ ಹೆಲಿ ಕಾಫ್ಟರ್ ನಲ್ಲಿ ಬೆಂಗಳೂರಿಗೆ ತೆರಳಿದರು. ಪಟ್ಟಣದಾಡ್ಯಂತ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇನ್ಸ್ಪೆಕ್ಟರ್ ಸುಮಾರಾಣಿ. ಕಿಕ್ಕೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರೇವತಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
*ವರದಿ.ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ
What's Your Reaction?