ಜನವಿರೋಧಿ ಮುಖ್ಯಾಧಿಕಾರಿ ಜಗರೆಡ್ಡಿ ವರ್ಗಾವಣೆಗೆ ಪುರಸಭೆ ಸದಸ್ಯರ ಒಕ್ಕೊರಲ ಆಗ್ರಹ: ಶ್ರೀಸಾಮಾನ್ಯರ ಕೆಲಸ ಮಾಡದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ ಮಂಜು

ಜನವಿರೋಧಿ ಮುಖ್ಯಾಧಿಕಾರಿ ಜಗರೆಡ್ಡಿ ವರ್ಗಾವಣೆಗೆ ಪುರಸಭೆ ಸದಸ್ಯರ ಒಕ್ಕೊರಲ ಆಗ್ರಹ: ಶ್ರೀಸಾಮಾನ್ಯರ ಕೆಲಸ ಮಾಡದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಸಕ ಮಂಜು

ಕೆ.ಆರ್.ಪೇಟೆ.: ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸತಾಯಿಸಿ ಗೋಳು ಹೊಯ್ದುಕೊಳ್ಳುತ್ತಿರುವ ಮುಖ್ಯಾಧಿಕಾರಿ ಜಗರೆಡ್ಡಿ ಕಳೆದ ಎರಡು ತಿಂಗಳುಗಳಿಂದ ಒಂದೇ ಒಂದು ಖಾತೆ ಅಥವಾ ಈಸ್ವತ್ತು ಕಡತಕ್ಕೆ ಸಹಿ ಮಾಡಿಲ್ಲ, ಇಂತಹ ಜನವಿರೋಧಿ ಅಧಿಕಾರಿಯ ಅವಶ್ಯಕತೆ ನಮಗಿಲ್ಲ, ಇವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿಕೊಡಿ, ಇಲ್ಲವೇ ವರ್ಗಾವಣೆ ಮಾಡಿಸಿಕೊಂಡು ಹೋಗಲು ತಿಳಿಸಿ ಎಂದು ಪುರಸಭೆಯ ಸದಸ್ಯರು ಪಕ್ಷಾತೀತವಾಗಿ ಶಾಸಕ ಮಂಜು ಹಾಗೂ ಪುರಸಭೆ ಆಡಳಿತಾಧಿಕಾರಿ ನಂದೀಶ್ ಅವರನ್ನು ಒತ್ತಾಯಿಸಿದ ಘಟನೆಯು ಪುರಸಭೆಯ ವಿಶೇಷ ಸಭೆಯಲ್ಲಿ ನಡೆಯಿತು.

ಇಂದು ಪುರಸಭೆಯ ವಿಶೇಷ ಸಭೆಯು ಸ್ವರ್ಣ ಜಯಂತಿ ಶಹರೀ ರೋಜ್ಗಾರ್ ಯೋಜನಾ ಭವನದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಂದಿನ ಸಭೆಯಲ್ಲಿ ಕೆ.ಆರ್.ಪೇಟೆ ಶಾಸಕರಾದ ಹೆಚ್.ಟಿ.ಮಂಜು ಅವರೂ ಭಾಗವಹಿಸಿ ಪಟ್ಟಣದ ಸಮಸ್ಯೆಗಳ ನಿವಾರಣೆಗೆ ಸದಸ್ಯರು ಪಕ್ಷಾತೀತವಾಗಿ ಕೈಜೋಡಿಸಿ ಕೆಲಸ ಮಾಡಬೇಕು ಎಂದು ವಿನಂತಿ ಮಾಡಿಕೊಂಡಿದ್ದು ಕೂಡ ವಿಶೇಷವಾಗಿತ್ತು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದಿರುವ ಜಗರೆಡ್ಡಿ ಜನಸಾಮಾನ್ಯರು ಹಾಗೂ ಪುರಸಭೆಯ ಸದಸ್ಯರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಚುನಾಯಿತ ಜನಪ್ರತಿನಿಧಿಗಳಾದ ಸದಸ್ಯರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳದ ಜಗರೆಡ್ಡಿ ಜನಸಾಮಾನ್ಯರ ಖಾತೆ ಬದಲಾವಣೆ, ಈಸ್ವತ್ತು, ಕಟ್ಟಡ ಪರವಾನಗಿ ಸೇರಿದಂತೆ ಒಂದೇ ಒಂದು ಸಾರ್ವಜನಿಕರ ಕೆಲಸವನ್ನು ಮಾಡಿಕೊಡುತ್ತಿಲ್ಲ. ಸಣ್ಣಪುಟ್ಟ ಕಾರಣಗಳನ್ನೇ ಮುಂದಿಟ್ಟುಕೊಂಡು ಕಡತಗಳಿಗೆ ಆದೇಶ ಮಾಡದೇ ಶ್ರೀಸಾಮಾನ್ಯರನ್ನು ಕಛೇರಿಗೆ ಅಲೆಸುತ್ತಿರುವ ಈತ ಕಾಮಗಾರಿಗಳ ಬಿಲ್ ಪಾವತಿಯ ಕಡತಗಳನ್ನು ಮಾತ್ರ ಕಮಿಷನ್ ಹಣದ ಆಸೆಗಾಗಿ ಕಣ್ಣುಮುಚ್ಚಿಕೊಂಡು ಸಹಿ ಮಾಡುತ್ತಿದ್ದಾರೆ. ಒಳಚರಂಡಿ ಯೋಜನೆಯ ಕಾಮಗಾರಿಯು ಸಂಪೂರ್ಣಗೊಂಡು ಜನತೆಯ ಸೇವೆಗೆ ಲೋಕಾರ್ಪಣೆ ಆಗದಿದ್ದರೂ ಹಿಂದಿನ‌ ಮುಖ್ಯಾಧಿಕಾರಿ ಬಸವರಾಜು ಅವರು ಒಳಚರಂಡಿ ಮಂಡಳಿಯ ಗುತ್ತಿಗೆದಾರರಿಗೆ ನಿರಪೇಕ್ಷಣಾ ಪತ್ರ ನೀಡಿದ್ದಾರೆ. ಈಗಾಗಲೇ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿರುವ ವಿಷಯಗಳನ್ನೇ ಮತ್ತೆ ಏಕಾಏಕಿ ವಿಶೇಷ ಸಭೆಯ ಹೆಸರಿನಲ್ಲಿ ಮತ್ತೆ ಸಭೆಗೆ ಚರ್ಚೆಗೆ ತಂದಿರುವ ಮುಖ್ಯಾಧಿಕಾರಿಯು ಸದಸ್ಯರ ಹಕ್ಕುಗಳಿಗೆ ಧಕ್ಕೆ ತಂದಿದ್ದಾರೆ. ಪುರಸಭೆ ಸಾಮಾನ್ಯ ಸಭೆ ಕರೆಯಲು ಕನಿಷ್ಠ ೮ ದಿನಗಳ ಅಂತರದಲ್ಲಿ ಸಭೆಯ ನೋಟೀಸನ್ನು ಸದಸ್ಯರಿಗೆ ಜಾರಿ ಮಾಡಬೇಕು. ಆದರೆ ೧೦ನೇ ತಾರೀಖು ಸಭೆಯ ಬಗ್ಗೆ ನೋಟೀಸ್ ತಯಾರಿಸಿ ೧೩ನೇ ತಾರೀಖಾದ ಇಂದು ಸಭೆ ಕರೆದಿದ್ದಾರೆ. ಇದರಿಂದಾಗಿ ಪುರಸಭೆಯ ನಿಯಮಾವಳಿಗಳ ಉಲ್ಲಂಘನೆಯಾಗಿದ್ದು ಸದಸ್ಯರ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪುರಸಭೆ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಆಡಳಿತಾಧಿಕಾರಿ ಹಾಗೂ ಶಾಸಕ ಮಂಜು ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಕಾನೂನು ಉಲ್ಲಂಘಿಸಿ ಸದಸ್ಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಜನವಿರೋಧಿ ಅಧಿಕಾರಿ ಜಗರೆಡ್ಡಿ ಅವರನ್ನು ಅಮಾನತ್ತು ಮಾಡುವಂತೆ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಹಿಂದೆ ಸಚಿವರಾಗಿದ್ದ ನಾರಾಯಣಗೌಡರು ಬಿಡುಗಡೆ ಮಾಡಿಸಿ ತಂದಿರುವ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಅತೀ ಅವಶ್ಯಕತೆ ಇರುವ ವಾರ್ಡುಗಳಲ್ಲಿ ಮಾತ್ರ ಮತ್ತೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮತ್ತೆ ಕೈಗೆತ್ತಿಕೊಳ್ಳಬೇಕು. ಆಮೆ ವೇಗದಲ್ಲಿ ನಡೆಯುತ್ತಿರುವ ಒಳ ಚರಂಡಿ ಯೋಜನೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸಲು ಕ್ರಮಕೈಗೊಳ್ಳಬೇಕು. ಹೊಸಹೊಳಲು ಗ್ರಾಮದಲ್ಲಿ ನಿವೇಶನ ವಿತರಣೆಗೆ ಸ್ವಾಧೀನಪಡಿಸಿಕೊಂಡಿರುವ ಆರೂವರೆ ಎಕರೆ ಭೂಮಿಯನ್ನು ಮತ್ತೆ ಅಳತೆ ಮಾಡಿಸಿ, ಗಿಡಗಂಟೆಗಳನ್ನು ತೆರವುಗೊಳಿಸಿ ನಿವೇಶನಗಳ ವಿತರಣೆಗೆ ಕಾರ್ಯಕ್ರಮ ಸಿದ್ಧಪಡಿಸಬೇಕು ಎಂಬ ಸದಸ್ಯರ ಒತ್ತಾಯಕ್ಕೆ ಧನಿಗೂಡಿಸಿದ ಶಾಸಕರು ಹಾಗೂ ಆಡಳಿತಾಧಿಕಾರಿಗಳು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ಧಯ್ಯ ಅವರಿಗೆ ನಿರ್ದೇಶನ ನೀಡಿ ನಿವೇಶನಗಳ ವಿತರಣೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಳತೆ ಮಾಡಿ ಒತ್ತುವರಿಯಾಗಿದ್ದರೆ ಪೋಲಿಸ್ ಸಹಾಯ ಪಡೆದು ಒತ್ತುವರಿ ತೆರವು ಮಾಡಿಸಿ ನಿವೇಶನ ವಿತರಣಾ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಪಟ್ಟಣದ ಎಲ್ಲಾ ೨೩ ವಾರ್ಡುಗಳಲ್ಲಿಯೂ ಹೊಸದಾಗಿ ಪೈಪ್‌ಲೈನ್ ಅಳವಡಿಸಲು ೩೫ಕೋಟಿ ರೂಪಾಯಿ ವಿಶೇಷ ಅನುದಾನ ಬಿಡಗಡೆಯಾಗಿದೆ. ಪೈಪ್‌ಲೈನ್ ಕಾಮಗಾರಿಯನ್ನು ಸಂಪೂರ್ಣಗೊಳಿಸಿದ ನಂತರವೇ ಹಳೇ(ಡಾ.ಅಂಬೇಡ್ಕರ್) ಕಿಕ್ಕೇರಿ ರಸ್ತೆಗಳ ಡಾಂಬರೀಕರಣ ಮಾಡಬೇಕು ಎಂಬ ಸದಸ್ಯರ ಒತ್ತಾಯಕ್ಕೆ ಶಾಸಕರು ಹಾಗೂ ಅಡಳಿತಾಧಿಕಾರಿಗಳು ಸಮ್ಮತಿ ಸೂಚಿಸಿದರು. ಜೋರಾಗಿ ಮಳೆ ಬಂದರೆ ಸಾಕು ಕೆರೆಯಾಗಿ ಬದಲಾಗುವ ಬಸ್ ನಿಲ್ದಾಣಕ್ಕೆ ಕಾಯಕಲ್ಪ ನೀಡಬೇಕು, ಒತ್ತುವರಿಯಾಗಿರುವ ರಾಜಕಾಲುವೆಯ ಒತ್ತುವರಿ ತೆರವು ಮಾಡಿಸಿ ಬಸ್ ನಿಲ್ದಾಣದಿಂದ ನೀರು ಹೊರಹೋಗುವಂತೆ ಬೃಹತ್ ಅಳತೆಯ ಪೈಪುಗಳನ್ನು ಅಳವಡಿಸಿ ಬಹುದಿನಗಳ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಸಭೆಯ ನಂತರ ರಾಜಕಾಲುವೆಯ ವೀಕ್ಷಣೆ ನಡೆಸಿದ ಶಾಸಕ ಮಂಜು, ಆಡಳಿತಾಧಿಕಾರಿ ನಂದೀಶ್, ಮುಖ್ಯಾಧಿಕಾರಿ ಜಗರೆಡ್ಡಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ ನಿಲ್ದಾಣದಿಂದ ನೀರು ಸರಾಗವಾಗಿ ಹರಿದು ಹೋಗದಿರುವುದೇ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಕೂಡಲೇ ಕ್ರಮಕೈಗೊಂಡು ಬಸ್ ನಿಲ್ದಾಣದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಶಾಸಕ ಮಂಜು ಸೂಚನೆ ನೀಡಿದರು.

ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಆರ್.ಲೋಕೇಶ್, ಹಿರಿಯ ಸದಸ್ಯರಾದ ಕೆ.ಸಿ.ಮಂಜುನಾಥ, ಬಸ್‌ಸಂತೋಷ್‌ಕುಮಾರ್, ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರ ಬಾಬೂ, ಶಾಮಿಯಾನ ತಿಮ್ಮೇಗೌಡ, ಗಿರೀಶ್, ಪ್ರವೀಣ್‌ಶೆಟ್ಟಿ, ಇಂದ್ರಾಣಿ, ಸೌಭಾಗ್ಯ, ಪಂಕಜಾ, ಕಲ್ಪನಾ, ಖಮ್ಮರ್‌ಬೇಗಂ, ಕೆ.ಎಸ್.ಪ್ರಮೋದ್ ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದು ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ದೊರಕಿಸಿಕೊಡಬೇಕು, ಜನವಿರೋಧಿ ಮುಖ್ಯಾಧಿಕಾರಿ ಜಗರೆಡ್ಡಿ ಅವರನ್ನು ಮೊದಲು ಕೆ.ಆರ್.ಪೇಟೆಯಿಂದ ಬಿಡುಗಡೆಗೊಳಿಸುವಂತೆ ಪಕ್ಷಾತೀತವಾಗಿ ಆಗ್ರಹಿಸಿದರು.

What's Your Reaction?

like

dislike

love

funny

angry

sad

wow