ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇಡೀ ದೇಶವೇ ಮೆಚ್ಚುವಂತೆ ಜನಪರವಾದ ದಕ್ಷ ಪ್ರಾಮಾಣಿಕ ಆಡಳಿತ ನೀಡುತ್ತಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಹೇಳಿದರು
ಅವರು ಕೆಆರ್ ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ವಿವಿಧ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಭಾರತ ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಇದೆಯೆಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯಅವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರವಾಗಿದೆ. ಚುನಾವಣೆಗೂ ಮುಂಚೆ ಕೊಟ್ಟ ಮಾತಿನಂತೆ ಭರವಸೆ ನೀಡಿದ್ದ ಎಲ್ಲಾ ಐದು ಗ್ಯಾರಂಟಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿ ಎಲ್ಲಾ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ತಲುಪಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಇತಿಹಾಸವನ್ನು ನಿರ್ಮಾಣ ಮಾಡಿದೆ. ಕೃಷಿಕರು ಹಾಗೂ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ, ರೈತರ ಎಲ್ಲ ಸಾಲಗಳ ಮೇಲಿನ ಬಡ್ಡಿ ಮನ್ನಾ ಸೇರಿದಂತೆ ಹತ್ತು ಹಲವು ಜನಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ಅಭಿವೃದ್ಧಿ ಕೆಲಸ ಕಾರ್ಯಗಳಿಗೂ ಒತ್ತು ನೀಡಿ ಜನಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿ ನೆರೆದಿರುವ ಫಲಾನುಭವಿಗಳೆ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದ ಚೆಲುವರಾಯಸ್ವಾಮಿ ಜನತೆಗೆ ಕೊಟ್ಟ ಮಾತನ್ನು ತಪ್ಪದೇ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ 46,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡುವ ಜೊತೆಗೆ ಪಕ್ಷಾತೀತವಾಗಿ ಜನತೆಯ ಕಲ್ಯಾಣವನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯನ್ನದೇ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಗೂ ಜನರು ಪಂಚ ಗ್ಯಾರಂಟಿ ಯೋಜನೆಗಳ ಫಲವನ್ನು ಪಡೆಯುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ರಾಜ್ಯವು ದಿವಾಳಿಯಾಗುತ್ತದೆ ಎಂದು ಬೊಗಳ ಬಿಡುತ್ತಿದ್ದ ನಾಯಕರಿಗೆ ಎಲ್ಲಾ ಐದು ಗ್ಯಾರಂಟಿಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಿ, ರಾಜ್ಯದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ನಾವು ಜನಪರ್ವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ದೇಶದ ಸಂಸತ್ ಸೇರಿದಂತೆ ಇತರೆ ರಾಜ್ಯಗಳಿಗೆ ಪರಿಚಯಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ ನರೇಂದ್ರ ಮೋದಿಯವರು ದೇಶದಲ್ಲಿ ಒಂದೇ ಒಂದು ಅಣೆಕಟ್ಟೆಯನ್ನು ನಿರ್ಮಾಣ ಮಾಡಲಿಲ್ಲ, ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಆಶಾ ಗೋಪುರವನ್ನು ಕಟ್ಟಿ ಜನತೆಯನ್ನು ವಂಚಿಸುತ್ತಿರುವ ನರೇಂದ್ರ ಮೋದಿಯವರು ಕಾಂಗ್ರೆಸ್ ಪಕ್ಷದ ಬಗ್ಗೆ ನಿಂದಿಸಿ ಮಾತನಾಡದಿದ್ದರೆ ಅವರಿಗೆ ನಿದ್ರೆಯೇ ಬರುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸ್ವಾತಂತ್ರ್ಯ ನಂತರ ನೂರಾರು ಅಣೆಕಟ್ಟುಗಳನ್ನು ನಿರ್ಮಿಸಿ, ದೇಶದಾದ್ಯಂತ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತಿರುವ ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿರುವ ಪಕ್ಷವಾಗಿದೆ. ಹಿರಿಯರಾದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ದುರ್ಗಾದೇವಿ, ತಾಯಿ ದುರ್ಗಾಮಾತೆ ಎಂದು ಸಂಭೋದಿಸಿ ಮಾತನಾಡುತ್ತಿದ್ದರು. ಪ್ರಧಾನಿ ರಾಜೀವ್ ಗಾಂಧಿ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ನಿರ್ಮಾಣ ಮಾಡಿ ಪ್ರತಿಯೊಬ್ಬ ಬಡವನ ಮನೆಗೂ ಮೊಬೈಲ್ ಹಾಗೂ ಟಿವಿ ಬರುವಂತೆ ಮಾಡಿ ಇತಿಹಾಸ ನಿರ್ಮಾಣ ಮಾಡಿದರು. ಆದರೆ ನರೇಂದ್ರ ಮೋದಿಯವರು ದೇಶದಲ್ಲಿ ಮತ್ತೋದ್ ಸಂಸತ್ ಭವನ ನಿರ್ಮಾಣ ಮಾಡಿದ್ದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡು, ಸುಳ್ಳಿನ ಸರಮಾಲೆಯನ್ನು ಪೋಣಿಸಿ ದೇಶದ ಜನತೆಯ ದಿಕ್ಕು ತಪ್ಪಿಸಿ, ಜಾತಿ ಜಾತಿಗಳ ನಡುವೆ ಸಂಘರ್ಷವನ್ನು ಉಂಟು ಮಾಡಿ ದೇಶದ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದವರು ಕೋಮು ಸೌಹಾರ್ದತೆಗೆ ಭಂಗ ತರಲು ಸಾಧ್ಯವಿಲ್ಲ, ಮಂಡ್ಯ ಜಿಲ್ಲೆಯ ಜನತೆ ರಾಜಕೀಯವಾಗಿ ಪ್ರಭುದ್ಧರಾಗಿದ್ದು ಕೋಮುವಾದಿಗಳ ಆಟ ಇಲ್ಲಿ ನಡೆಯಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್ ಟಿ ಮಂಜು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಪಂಚ ಗ್ಯಾರೆಂಟಿ ಯೋಜನೆಗಳಿಂದ ಜನರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ಪಕ್ಷಾತೀತವಾಗಿ ಎಲ್ಲಾ ಬಡ ಜನರಿಗೆ ನೇರವಾಗಿ ಮುಟ್ಟಿವೆ ಆದ್ದರಿಂದ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಮಂಡ್ಯ ಜಿಲ್ಲಾಧಿಕಾರಿ ಡಾ, ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ನಾಗಮಂಗಲ ಡಿವೈಎಸ್ ಪಿ ಡಾ.ಎ.ಆರ್. ಸುಮಿತ್, ಮಂಡ್ಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಿಎಲ್ ದೇವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಪುರಸಭಾ ಮುಖ್ಯ ಅಧಿಕಾರಿ ಸತೀಶ್, ವಲಯ ಅರಣ್ಯಾಧಿಕಾರಿ ಅನಿತಾ ಪ್ರವೀಣ್, ಸಿಡಿಪಿಒ ಅರುಣಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೋಡಿ ಮಾರನಹಳ್ಳಿ ದೇವರಾಜು, ಕೊಡಗಹಳ್ಳಿ ಮಂಜೇಗೌಡ, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ತಾಲೂಕಿನ ವಿವಿಧ ಭಾಗಗಳಿಂದ 5000ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದು ಇಂದಿನ ಸಭೆಯ ವಿಶೇಷವಾಗಿತ್ತು. ಕೆ. ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕಿ ಸುಮಾರಾಣಿ, ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್ ಸ್ವಾಗತಿಸಿದರು, ತಹಶೀಲ್ದಾರ್ ನಿಸರ್ಗಪ್ರಿಯ ವಂದಿಸಿದರು, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಡಾಕ್ಟರ್ ನರಸಿಂಹರಾಜ ಕಾರ್ಯಕ್ರಮ ನಡೆಸಿಕೊಟ್ಟರು.
*ವರದಿ, ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ
*
What's Your Reaction?