ಸಾಮಾಜಿಕ ನ್ಯಾಯದ ಹರಿಕಾರರಾದ ಡಿ.ದೇವರಾಜ ಅರಸು ಅವರು ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗೆ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ತುಳಿತಕ್ಕೊಳಗಾದ ಜನರ ಬಾಳಿನ ಬೆಳಕಾಗಿದ್ದಾರೆ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಾದ ವೆಂಕಟೇಶ್ ಅಭಿಮಾನದಿಂದ ಹೇಳಿದರು*.
ಅವರು ತಾಲ್ಲೂಕು ಆಡಳಿತ ಕಾರ್ಯಸೌಧದಲ್ಲಿರುವ ಬಿಸಿಎಂ ಕಛೇರಿಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 109ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಹಿಂದುಳಿದ ವರ್ಗಗಳು ಹಾಗೂ ಜಾತಿಗಳ ಜನರ ಧೀಶಕ್ತಿಯಾಗಿರುವ ದೇವರಾಜ ಅರಸ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಹಿಂದುಳಿದ ಜಾತಿಗಳ ಜನರಿಗೆ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಸ್ಥಾನ ಮಾನ ನೀಡಿ ಶಕ್ತಿ ತುಂಬುವ ಜೊತೆಗೆ ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸಿ, ಉಳುವವನೇ ಭೂಮಿಯ ಒಡೆಯ ಎಂಬ ಧಿಟ್ಟ ಭೂ ಸುಧಾರಣ ಕಾನೂನನ್ನು ಅನುಷ್ಠಾನ ಮಾಡಿ ಇತಿಹಾಸ ನಿರ್ಮಿಸಿದ ಮಹಾನ್ ಚೇತನವಾದ ಅರಸು ಅವರು ಹಿಂದುಳಿದವರು ಹಾಗೂ ತುಳಿತಕ್ಕೊಳಗಾದ ಜನರು ಉಜ್ವಲ ಭವಿಷ್ಯ ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ವೆಂಕಟೇಶ್ ಅರಸು ಅವರ ಗುಣಗಾನ ಮಾಡಿದರು.
ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಕೆ. ಸವಿತ ಮಾತನಾಡಿ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಅರಸು ಅವರು ಶೋಷಣೆ ಹಾಗೂ ಬಡತನ ನಿರ್ಮೂಲನೆಗೆ ಹೋರಾಟ ನಡೆಸಿ ಅಸಂಘಟಿತ ಸಮುದಾಯಗಳನ್ನು ಸಂಘಟಿಸಿ ರಾಜಕೀಯ ಶಕ್ತಿ ತುಂಬಿದ ಅರಸು ಅವರು ಶೋಷಿತ ಹಿಂದುಳಿದ ಸಮುದಾಯಗಳ ಸ್ವಾಭಿಮಾನಿ ಜೀವನಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಸವಿತ ಹೇಳಿದರು.
ನಿಲಯ ಪಾಲಕರಾದ ಡಿ. ಕೆ. ಪ್ರತಿಪ, ಹೆಚ್.ವಿ.ಜಗಧೀಶ್, ಎನ್.ಸಿ.ಗೀತಾ, ಎನ್.ಎಸ್. ಪುಷ್ಪಾ, ಮಧುಕುಮಾರ್, ಬಿ. ಕೆ.ಚಂದ್ರಶೇಖರ್, ಚಿರಂಜೀವಿ, ಬಿ. ಶೃತಿ, ಚೈತ್ರ, ದೀಪಿಕಾ, ಅನಿಲ್ ಕುಮಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
What's Your Reaction?