ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕುಂದೂರು ಮಠದಲ್ಲಿ ಸೋಮವಾರ ಸಂಜೆ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಆದಿಚುಂಚನಗಿರಿ ಕುಂದೂರು ಶಾಖಾ ಮಠದ ಅಣತಿ ದೂರದಲ್ಲಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ನೆರವೇರಿತು. ಸಹಸ್ರಾರು ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು. ಸಂಜೆ 5.30ರ ಸಮಯದಲ್ಲಿನ ಗೋಧೂಳಿ ಲಗ್ನದಲ್ಲಿ ಮಠದ ಮುಂಭಾಗದಲ್ಲಿದ್ದ ರಥಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಮರದ ಮೂರ್ತಿ ಪ್ರತಿಷ್ಠಾಪಿಸಿ ಜಯಘೋಷದೊಂದಿಗೆ ಸಹಸ್ರಾರು ಭಕ್ತರು ರಥ ಎಳೆದರು. ಹಾಸನ ಜಿಲ್ಲೆಯ ಅರಸೀಕೆರೆ, ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು, ಚಾಳಗಾಲ, ಅಗ್ರಹಾರ, ಅಗ್ಗನಹಳ್ಳಿ, ಅಪ್ಪೇನಹಳ್ಳಿ, ತಿಮ್ಮಲಾಪುರ, ತರಬೇನಹಳ್ಳಿ ,ವಾರನಹಳ್ಳಿ ಬೆಳಗುಲಿ, ಕರಡೇವು, ನೆಟ್ಟೆಕೆರೆ, ಯಲಿಯೂರು, ಮದಲ್‌ಪುರ, ಮೂಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಗೆ ಜೈಕಾರ ಕೂಗಿದರು. ರಥವು ಮುಂದೆ ಚಲಿಸುವಾಗ ರಥದ ಮೇಲೆ ಪ್ರತಿಷ್ಠಾಪಿಸಿದ್ದ ಕಳಶಕ್ಕೆ ಬಾಳೆಹಣ್ಣು ಹಾಗೂ ದವನ ಎಸೆಯುವ ಮೂಲಕ ಭಕ್ತರು ಪುನೀತರಾದರು. ನಂತರ ಮಠದ ಆವರಣದಲ್ಲಿ ಸರ್ಪ ವಾಹನೋತ್ಸವ ನಡೆಯಿತು.
ರಥೋತ್ಸವದ ಪ್ರಯುಕ್ತ ಮಠದ ಆವರಣದಲ್ಲಿ ದೇವಾಲಯಗಳಲ್ಲಿ ವಿವಿಧ ಉತ್ಸವಗಳು, ಧಾರ್ಮಿಕ ಪೂಜಾ ಕೈಂಕರ್ಯ ಪ್ರಾರಂಭವಾಗಿದ್ದು, ಮಠ ಹಾಗೂ ಕ್ಷೇತ್ರದಲ್ಲಿ ಎಲ್ಲಾ ದೇವಾಲಯಗಳನ್ನು ತಳಿರು ತೋರಣ, ಹೂಗಳಿಂದ ಸಿಂಗರಿಸಲಾಗಿದೆ. ರಥೋತ್ಸವಕ್ಕೆ ಸಾಹಸ್ರಾರು ಭಕ್ತರು ಆಗಮಿಸುವ ಕಾರಣ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ವಿಶೇಷ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು.ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ನವ ವಧು- ವರರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ರಥೋತ್ಸವಕ್ಕೆ ಆಗಮಿಸುವ ಭಕ್ತರ ವಾಹನ ನಿಲುಗಡೆ, ಯಾವುದೇ ಆಹಿತಕರ ಘಟನೆ ನಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲನಂದನಾಥ ಸ್ವಾಮೀಜಿ ನೂತನ ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದ ದೇವರಿಗೆ ಪೂಜೆ ನೆರವೇರಿಸಿದರು.
ಬಳಿಕ ವೇದಿಕೆಯ ಸಮಾರಂಭದಲ್ಲಿ ಚುಂಚಶ್ರೀಗಳು ಮಾತನಾಡಿ, ಜಾತ್ರಾ ಮಹೋತ್ಸವ ಹಾಗೂ ಹಬ್ಬಗಳು ಗ್ರಾಮಗಳಲ್ಲೂ ಸಂಭ್ರಮದಲ್ಲಿ ಇರುವಂತೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸಾಕಷ್ಟು ಸಂತೋಷ ತರುವುದಲ್ಲದೆ ಗ್ರಾಮಗಳಲ್ಲಿ ನೆಮ್ಮದಿ ವಾತಾವರಣ ಸೃಷ್ಟಿಯಾಗಲಿದೆ. ದೇವಾಲಯ ಗಳು, ಮಠ ಹಾಗೂ ಧ್ಯಾನ ಕೇಂದ್ರಗಳು ಮನುಕುಲಕ್ಕೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಹೇಳಿದರು. ಹಾಸನ ಶಾಖಾ ಮಠದ ಕಾರ್ಯದರ್ಶಿ ಶಂಭುನಾಥಸ್ವಾಮೀಜಿ, ಕಬ್ಬಳಿ ಕ್ಷೇತ್ರದ ಶಿವಪುತ್ರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಕೆ ಎಸ್ ಅಧಿಕಾರಿ ಶೀತಲ್, ಮೂಡನಹಳ್ಳಿ ಚಂದ್ರಣ್ಣ, ಸೇರಿದಂತೆ ಇತರರು ಹಾಜರಿದ್ದರು.
What's Your Reaction?