ಚಿರತೆ ದಾಳಿ: ರೈತನಿಗೆ ಗಂಭೀರ ಗಾಯ

ಚಿರತೆ ದಾಳಿ:  ರೈತನಿಗೆ ಗಂಭೀರ ಗಾಯ

ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ದೊಡ್ಡಗಾಡಿಗನಹಳ್ಳಿ ಗ್ರಾಮದಲ್ಲಿ ಅರಣ್ಯ ಸಮೀಪದಲ್ಲಿ ದನ, ಕುರಿಗಳನ್ನು ಮೇಯಿಸುತ್ತಿದ್ದ ರೈತರೊಬ್ಬರಿಗೆ ಚಿರತೆಯು ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

ದೊಡ್ಡಗಾಡಿಗನಹಳ್ಳಿ ಗ್ರಾಮದ ಗೋವಿಂದೇಗೌಡರ ಮಗ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿರುವ ಎಂದು ತಿಳಿದು ಬಂದಿದೆ.

ಘಟನೆ ವಿವರ: ರೈತ ವೆಂಕಟೇಶ್ ಅವರು ತಮ್ಮ ಜಮೀನಿನ ಬಳಿ ಇರುವ ಅರಣ್ಯ ಪ್ರದೇಶದ ಹತ್ತಿರ ದನಗಳು ಹಾಗೂ ಕುರಿಗಳನ್ನು ಮೇಯಿಸುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯದ ಪೊದೆಯಲ್ಲಿ ಅವಿತು ಕುಳಿತಿದ್ದ ಚಿರತೆಯು ರೈತ ವೆಂಕಟೇಶ್ ಮೇಲೆ ದಾಳಿ ನಡೆಸಿದೆ ಪರಿಣಾಮ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಕೂಡಲೇ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ-ಲಕ್ಷ್ಮಮ್ಮ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ರೈತ ವೆಂಕಟೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಡಾ.ಅನಿತಾ ಬೇಟಿ ನೀಡಿ ಗಾಯಾಳುವಿಗೆ ದೈರ್ಯ ಹೇಳಿ ಇಲಾಖೆಯ ವತಿಯಿಂದ ಚಿಕಿತ್ಸಾ ವೆಚ್ಚ ಹಾಗೂ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದ್ದಾರೆ.

*ಚಿರತೆ ಸೆರೆಗೆ ಆಗ್ರಹ*: 

ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಜಾಸ್ತಿಯಾಗಿದೆ. ಅರಣ್ಯ ಇಲಾಖೆಯ ಬಳಿ ಒಂದೆರಡು ಮಾತ್ರ ಬೋನಿವೆ. ಇನ್ನಷ್ಟು ಬೋನು ಗಳನ್ನು ತರಿಸಿ ಚಿರತೆ ಹಾವಳಿ ಇರುವ ಕಡೆ ಇಟ್ಟು ಚಿರತೆಗಳನ್ನು ಸೆರೆ ಹಿಡಿದು ರೈತರಲ್ಲಿರುವ ಆತಂಕವನ್ನು ದೂರ ಮಾಡಬೇಕು ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಪ್ರಶಾಂತ್ ಅರಣ್ಯಾಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.

What's Your Reaction?

like

dislike

love

funny

angry

sad

wow